Miss. H.R.Kannika

ವಿದ್ಯಾರ್ಥಿಗಳ ಪಾಲಿನ ಕಾಮಧೇನು ಕನ್ನಿಕಾ
ಕೃಷಿ ಪ್ರಧಾನ ಜಿಲ್ಲೆ ಮಂಡ್ಯ ಶೈಕ್ಷಣಿಕವಾಗಿಯೂ ಸಾಕಷ್ಟು ಪ್ರಗತಿ ಸಾಧಿಸಿದೆ. ಇದಕ್ಕೆ ಅದೆಷ್ಟೋ ಕಾಣದ ಕೈಗಳ ಪರಿಶ್ರಮವೂ ಇದೆ. ಅಂತಹವರ ಸಾಲಿನಲ್ಲಿ ಹೆಚ್.ಆರ್.ಕನ್ನಿಕಾ ಕೂಡ ಒಬ್ಬರು.
ಗಾಂಧಿನಗರದ ಹೆಚ್.ಬಿ.ರಾಮಕೃಷ್ಣ ಹಾಗೂ ಎಲ್.ಕಮಲ ಸುಪುತ್ರಿಯಾಗಿರುವ ಇವರು, ಎಂ. ಎಸ್ಸಿ (ಗಣಿತ), ಎಂ.ಎ (ಸಮಾಜಶಾಸ್ತ್ರ), ಎಂ.ಎ (ಕನ್ನಡ), ಎಂ.ಫಿಲ್, ಬಿ.ಇಡಿ, ಹಿಂದಿ ವಿದ್ವಾನ್, ಹಿಂದಿ ಶಿಕ್ಷಕು (ಬಿ.ಇಡಿ) ,ಪಿ.ಜಿ.ಡಿ.ಎಸ್.ಇ. ಉನ್ನತ ವ್ಯಾಸಂಗ ಮಾಡಿದ್ದು, ಗಣಿತಶಾಸ್ತ್ರ ಮತ್ತು ಸಮಾಜಶಾಸ್ತ್ರದಲ್ಲಿ ವಿಶ್ವವಿದ್ಯಾನಿಲಯದಲ್ಲಿ ರಾಂಕ್ ಪಡೆದಿದ್ದಾರೆ. ಕಳೆದ ೨೯ ವರ್ಷದಿಂದ ಮಂಡ್ಯದಲ್ಲಿ ನವೋದಯ ವಸತಿ ಶಾಲೆ, ಅಳಿಕೆ ವಸತಿ ಶಾಲೆ, ಮೊರಾರ್ಜಿ ವಸತಿ ಶಾಲೆ, ಸೈನಿಕ ವಸತಿ ಶಾಲೆ, ರಾಮಕೃಷ್ಣ ಆಶ್ರಮ ವಸತಿ ಶಾಲೆ, ಸಾಯಿ ಆಶ್ರಮ ವಸತಿ ಶಾಲೆ, ಅಂಬೇಡ್ಕರ್ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಮತ್ತಿತರ ಶಾಲೆಯ ಪ್ರವೇಶ ಪರೀಕ್ಷೆ ಬಯಸುವ ಮಕ್ಕಳಿಗೆ ಕಡಿಮೆ ಶುಲ್ಕ ಪಡೆದು ತರಬೇತಿ ನೀಡುವ ಕಾಯಕದಲ್ಲಿ ನಿರತರಾಗಿದ್ದು, ವಿದ್ಯಾರ್ಥಿಗಳ ಪಾಲಿಗೆ ಕಾಮಧೇನುವಾಗಿದ್ದಾರೆ.
ಶಿಕ್ಷಣ ಕ್ಷೇತ್ರ:
ಕನ್ನಿಕಾ ಶಿಲ್ಪ ನವೋದಯ ತರಬೇತಿ ಸಂಸ್ಥೆಯನ್ನು ೧೯೯೬-೧೯೯೭ ರಲ್ಲಿ ಪ್ರಾರಂಭಿಸಿ ಸಂಸ್ಥೆಯ ಮುಖ್ಯ ತರಬೇತಿದಾರರಾಗಿ ಸಾವಿರಾರು ಮಕ್ಕಳಿಗೆ ತರಬೇತಿ ನೀಡುತ್ತಾ ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಶ್ರಮಿಸುತ್ತಾ ಬಂದಿದ್ದಾರೆ.
ಇವರ ಬಳಿ ತರಬೇತಿ ಪಡೆದು ಉನ್ನತ ವ್ಯಾಸಂಗ ಮಾಡಿರುವ ಸಾಕಷ್ಟು ವಿದ್ಯಾರ್ಥಿಗಳು ಐ.ಎ.ಎಸ್ ಹಾಗೂ ಐ.ಪಿ.ಎಸ್ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಉತ್ತಮ ಸ್ಥಾನದಲ್ಲಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ನಡೆಸುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವೇತನಕ್ಕಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಿ ಅವರ ಶಿಕ್ಷಣಕ್ಕೆ ನೆರವು ನೀಡುತ್ತಾ ಬಂದಿದ್ದಾರೆ. ಇದರ ಪರಿಣಾಮ ನೂರಾರು ಮಕ್ಕಳು ಉನ್ನತ ವ್ಯಾಸಂಗವನ್ನು ಪೂರೈಸಿ ಉನ್ನತ ಹುದ್ದೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವಕಾಶ ವಂಚಿತ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿರುವ ಹೆಗ್ಗಳಿಕೆ ಇವರದಾಗಿದೆ.
ನೂರಾರು ವಿಶೇಷಚೇತನ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಿ ಅವರಲ್ಲಿರುವ ಕೀಳರಿಮೆ ತೊರೆದು ಸಮಾಜದ ಮುಖ್ಯ ವಾಹಿನಿಗೆ ಬರಲು ಶ್ರಮಿಸುತ್ತಿದ್ದಾರೆ.
ಪ್ರತಿವರ್ಷ ಸರಕಾರಿ ಶಾಲೆಯ ಬಡ ಮಕ್ಕಳಿಗೆ ಉಚಿತವಾಗಿ ೨೦೦೦ಕ್ಕೂ ಅಧಿಕ ಉಚಿತ ನೋಟ್ ಬುಕ್ ವಿತರಣೆ, ಎಸ್. ಎಸ್.ಎಲ್.ಸಿಯಲ್ಲಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಅಂಕ ವೀರ ಪ್ರಶಸ್ತಿ ಪ್ರದಾನ, ವಿವಿಧ ಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ವ್ಯಕ್ತಿತ್ವ ವಿಕಸನ ತರಬೇತಿ ಕೊಡುತ್ತಾ ಸಮಾಜಮುಖಿ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮ ಸ್ವಂತ ಹಣವನ್ನು ಸರ್ಕಾರಿ ಶಾಲೆಯಲ್ಲಿ ಓದಿ ವೈದ್ಯಕೀಯ ಪದವಿಯನ್ನು ಪಡೆಯಲು ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಿದ್ದಾರೆ.
ಪರಿಸರ ಸಂರಕ್ಷಣೆ ಅಂಗವಾಗಿ ಪರಿಸರ ದಿನದಂದು ಪ್ರತಿವರ್ಷ ಗಿಡನೆಡುವ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದಾರೆ. ಸಂಸ್ಥೆಯಿಂದ ಮಹಿಳೆಯರಿಗೆ ಉದ್ಯೋಗ ನೀಡಿ ಅವರ ಆರ್ಥಿಕ ಬೆಳವಣಿಗೆಗೆ ನೆರವಾಗುತ್ತಿದಾರೆ.
ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅನನುಕೂಲವಾಗಬಾರದೆಂಬ ದೃಷ್ಟಿಯಿಂದ ಆನ್ಲೈನ್ ತರಗತಿ ಮಾಡುವ ಮೂಲಕ ಹಾಗೂ ಪರೀಕ್ಷಾ ಸಮಯದಲ್ಲಿ ವಿಶೇಷ ತರಗತಿ ತೆಗೆದುಕೊಂಡು ಪ್ರಸಕ್ತ ಸಾಲಿನಲ್ಲಿ ನವೋದಯ ವಿದ್ಯಾಲಯಕ್ಕೆ ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲೆಯಿಂದ ಆಯ್ಕೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


2 ಬಾರಿ ಬುಕ್ ಆಫ್ ರೆಕಾರ್ಡ್:
ಅಂಚೆಯ ಕಾರ್ಡ್ನಲ್ಲಿ ಕನ್ನಡ ಎಂಬ ಪದವನ್ನು ೨೦೦೦ ಸಲ ಬರೆದು (೬೦೦೦ ಅಕ್ಷರಗಳನ್ನು ಬರೆದು) ಕರ್ನಾಟಕ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆಯಾಗಿರುವುದು ಇವರ ಪರಿಶ್ರಮಕ್ಕೆ ತಕ್ಕ ಸಿಕ್ಕ ಫಲವಾಗಿದೆ. ೨೦೨೦ರಲ್ಲಿ ಅತೀ ಹೆಚ್ಚಿನ ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರು ಇವರ ಸಂಸ್ಥೆಯನ್ನು ಕರ್ನಾಟಕ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಗೊಳಿಸಿದ್ದಾರೆ.
ಸಾಮಾಜಿಕ ಸೇವೆಗೆ 2 ಬಾರಿ ರಾಜ್ಯ ಪ್ರಶಸ್ತಿ:
ಇವರ ಸಾಮಾಜಿಕ ಸೇವೆ ಗುರುತಿಸಿ ಕರ್ನಾಟಕ ಸರ್ಕಾರ, ಮಂಡ್ಯ ಜಿಲ್ಲಾಡಳಿತದಿಂದ ೨೦೧೭ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ವಿವಿಧ ಸಂಘ ಸಂಸ್ಥೆಗಳಿಂದ ರಾಷ್ಟ, ರಾಜ್ಯ, ಜಿಲ್ಲಾ ಪ್ರಶಸ್ತಿಗಳು ಸಂದಿವೆ. ರಾಹುಲ್ಗಾಂಧಿ ಯಂಗ್ ಅಚೀವ್ಮೆಂಟ್ ಅವಾರ್ಡ್-೨೦೦೭, ರಾಜೀವ್ ಗಾಂಧೀ ಏಕತಾ ರಾಷ್ಟ್ರೀಯ ಪ್ರಶಸ್ತಿ -೨೦೦೮, ಜವಹರಲಾಲ್ ನೆಹರು ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-೨೦೧೧ ,ಬುದ್ಧ ಶಾಂತಿ ರಾಷ್ಟ್ರೀಯ ಪ್ರಶಸ್ತಿ-೨೦೧೨, ಡಾ|| ರಾಧಾಕೃಷ್ಣನ್ ಶಿಕ್ಷಣ ರತ್ನ ಪ್ರಶಸ್ತಿ -೨೦೧೨, ಶ್ರೀಗಂಧ ಕಲಾ ಕೇಸರಿ ಪ್ರಶಸ್ತಿ-೨೦೧೨, ಸರಸ್ವತಿ ಸದ್ಭಾವನಾ ಪ್ರಶಸ್ತಿ -೨೦೧೨, ಕರ್ನಾಟಕ ರತ್ನಶ್ರೀ -೨೦೧೪, ಶಿಕ್ಷಣ ರತ್ನ ಪ್ರಶಸ್ತಿ -೨೦೧೨, ಸಿದ್ಧಗಂಗಾ ಶ್ರೀ ಸೇವಾ ಪ್ರಶಸ್ತಿ-೨೦೨೧ ಹಾಗೂ ೨೦೨೦ರಲ್ಲಿ ‘ಸ್ವರ್ಣ ಪ್ರಶಸ್ತಿ,ಯನ್ನು ನೀಡಿ ಇವರನ್ನು ಗೌರವಿಸಲಾಗಿದೆ. ಪ್ರಜಾವಾಣಿ ಪತ್ರಿಕೆಯವರು 2020ರ ವರ್ಷದ ಸಾಧಕರು ಎಂದು ಗೌರವಿಸಿದ್ದಾರೆ.
ರಾಜ್ಯ ಸರ್ಕಾರವು ೨೦೨೨ರಲ್ಲಿ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೨೪ರಲ್ಲಿ ಕರ್ನಾಟಕ ಸರ್ಕಾರ ಮಕ್ಕಳ ದಿನಾಚರಣೆಯಂದು ನೀಡುವ ‘ವ್ಯಕ್ತಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಇವರ ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕ ಸೇವೆಗಾಗಿ ಕಸಾಪ ಮಂಡ್ಯರವರು ೨೦೨೩ರಲ್ಲಿ ೫ನೇ ಮಂಡ್ಯ ನಗರ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. ಕೃಷಿಕ್ ಲಯನ್ಸ್ ಸಂಸ್ಥೆ ರವರು ೨೦೨೩ ರಲ್ಲಿ ವರ್ಷದ ಸಾಧಕರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮೈಸೂರು ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ (ರಿ.) ಕೊಡ ಮಾಡುವ ‘ಶಿಷ್ಯರು ಮೆಚ್ಚಿದ ಗುರು ‘ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟ(ರಿ.) ಮಂಡ್ಯದ ವತಯಿಂದ ಶ್ರೀಮತಿ ಪುಟ್ಟತಾಯಮ್ಮ ಮತ್ತು ಶ್ರೀ ಎಂ.ಕೆ. ರಾಮಲಿಂಗೇಗೌಡ ಸ್ಮಾರಕ ದತ್ತಿ ಪ್ರಶಸ್ತಿ ದೊರಕಿದೆ. ಒಕ್ಕಲಿಗ ವಾಯ್ಸ್ ಮಾಸಪತ್ರಿಕೆಯವರ ‘ಮಣ್ಣಿನ ಹಣತೆ’ಯಲ್ಲಿ ಇವರ ಕುರಿತು ಪರಿಚಯಾತ್ಮಕ ಲೇಖನವಿದೆ. ಕರ್ನಾಟಕ ಸಂಘದಿಂದ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ. ಟಿವಿ-5 ‘ನಮ್ಮ ಬಾಹುಬಲಿʼ ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ.
ವಿಶೇಷ ಚೇತನರ ಬಗ್ಗೆ ವಿಶೇಷ ಕಾಳಜಿ:
ಕನ್ನಿಕಾ ಅವರಿಗೆ ವಿಶೇಷಚೇತರನರ ಬಗ್ಗೆ ವಿಶೇಷ ಕಾಳಜಿ. ವಿಶೇಷಚೇತನ ಸಾಹಿತಿ ಆ.ರಾ. ಬಾಲಕೃಷ್ಣ ಆನಸೋಸಲು ಅವರ ‘ಕಾಡುಮಲ್ಲಿಗೆ’ ಕೃತಿಯನ್ನು ಮುದ್ರಿಸಿ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಕೀರ್ತಿ ಇವರದಾಗಿದೆ. ಕೊರೊನಾ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಪೇಟೆಬೀದಿ ನಿವಾಸಿ ಅಂಗವಿಕಲ ವಿದ್ಯಾರ್ಥಿ ಪುರುಷೋತ್ತಮ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಎಸ್ ಎಸ್.ಎಲ್. ಸಿ ಮತ್ತು ಪಿಯುಸಿ ಉತ್ತಮ ಅಂಕಗಳನ್ನು ಪಡೆದಂತಹ ವಿಶೇಷ ಚೇತನ ಮಕ್ಕಳಿಗೂ ಕೂಡ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿದ್ದಾರೆ.
ಸಾಹಿತ್ಯ ಕೃಷಿ ಮೇಲೂ ಪ್ರೀತಿ:
ಕನ್ನಿಕಾ ಅವರು ಕೇವಲ ಶೈಕ್ಷಣಿಕ ಕ್ಷೇತ್ರದಲ್ಲಷ್ಟೇ ಅಲ್ಲದೇ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ‘ಮುನ್ನಡೆ’, ‘ಮೌನದಿಂದಿರಿ’, ‘ಸ್ನೇಹದ ಹಣತೆ’ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಮುನ್ನಡೆ ಕವನ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ 10,000 ರೂ.ಗಳ ಪ್ರೋತ್ಸಾಹ ಧನ ಲಭಿಸಿದೆ. ‘ತರಕಾರಿ ಮುದುಕಿ ‘ಎಂಬ ಕಥೆಯೂ ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಕಥಾ ಸ್ಪರ್ಧೆಯಲ್ಲಿ ಉತ್ತಮ ಕಥೆ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದುವರೆವಿಗೂ ೨೧ ಕೃತಿಗಳನ್ನು ರಚಿಸಿದ್ದಾರೆ. ಮಂಡ್ಯ ತಾಲೂಕು ಹದಿನಾರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿಕೊಂಡಿರುತ್ತಾರೆ. 5ನೇ ಮಂಡ್ಯನಗರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಹಾವೇರಿಯಲ್ಲಿ ನಡೆದ ೮೬ ನೇಯ ಅಖಿಲ ಭಾರತ ಸಾಹಿತ್ಯ ಸಮ್ಮೇಳದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ‘ಮಹಿಳಾ ಮಾಣಿಕ್ಯಗಳು’ ಕೃತಿಗೆ ರಾಜ್ಯ ಮಟ್ಟದ ‘ಅಡ್ವೈಸರ್ ಪ್ರಶಸ್ತಿ’ ಸಿಕ್ಕಿದೆ. ಅಲ್ಲದೆ, ವಿಶೇಷಚೇತನರ ಕವಿಗೋಷ್ಠಿಯನ್ನು ಆಯೋಜಿಸಿದ್ದಾರೆ. ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಸಾಹಿತಿಗಳ ನಾಲ್ಕು ಕೃತಿಗಳನ್ನು ತಮ್ಮ ಸ್ವಂತ ಹಣದಿಂದ ಮುದ್ರಿಸಿ ಪ್ರಕಟಗೊಳಿಸಿದ್ದಾರೆ. ಅಲ್ಲದೆ ಕನ್ನಿಕಾ ಶಿಲ್ಪ ನವೋದಯ ಎಜುಕೇಶನ್ ಟ್ರಸ್ಟ್ ಮೂಲಕ ‘ಕನ್ನಿಕ ಶಿಲ್ಪ’ ಸಾಹಿತ್ಯ ಪ್ರಶಸ್ತಿ, ಶಿಕ್ಷಕರ ದಿನಾಚರಣೆಯೆಂದು ‘ಕನ್ನಿಕಾ ಶಿಲ್ಪ’ ಶಿಕ್ಷಣ ಪ್ರಶಸ್ತಿ , ಮಹಿಳಾ ದಿನಾಚರಣೆಯಂದು ‘ಕನ್ನಿಕಾ ಶಿಲ್ಪ’ ಸಮಾಜ ಸೇವಾ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದಾರೆ.
ಪ್ರಶಸ್ತಿ ಹಣ ಸಮಾಜ ಸೇವೆಗೆ ಮೀಸಲು:
ಸಂಘ ಸಂಸ್ಥೆಗಳು ಹಾಗೂ ಸರ್ಕಾರಗಳು ನೀಡುವ ಪ್ರಶಸ್ತಿ ಮೊತ್ತಕ್ಕೆ ಇವರು ಯಾವತ್ತೂ ಆಸೆ ಪಟ್ಟವರಲ್ಲ. ಬಂದ ಹಣದಲ್ಲಿ ನಯಾಪೈಸೆಯನ್ನು ಇಟ್ಟುಕೊಳ್ಳದೇ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೀಡುವ ಮೂಲಕ ಸಮಾಜಕ್ಕೆ ತಮ್ಮ ಕೈಲಾದ ಅಳಿಲು ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮ ಸ್ವಂತ ಹಣದಿಂದ ಸರ್ಕಾರಿ ಶಾಲೆಗೆ ಬಣ್ಣವನ್ನು ಮತ್ತು ಗೋಡೆ ಬರಹ ಬರೆಸಿದ್ದಾರೆ ಮತ್ತು ನೀರು ಶುದ್ಧೀಕರಿಸುವ ಯಂತ್ರ, ನಿಘಂಟುಗಳನ್ನು, ಲೇಖನ ಸಾಮಗ್ರಿಗಳನ್ನು ಕೊಟ್ಟು ಗ್ರಾಮಾಂತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಿದ್ದಾರೆ.
ಇತ್ತೀಚೆಗೆ ತಮ್ಮ ಟ್ರಸ್ಟ್ ನಿಂದ ಗೋಪಾಲಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ಬಿಳಿದೇಗಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್ ಟಾಪ್ ಅನ್ನು ಕೊಡುಗೆಯಾಗಿ ನೀಡಿ, ಕೊಡುಗೈ ದಾನಿಯಾಗಿದ್ದಾರೆ.
